ಕ್ಯಾನರಿ ಹುಲ್ಲು

ಪೋಯೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ಬಗೆಯ ಹುಲ್ಲು. ಫಲಾರಿಸ್ ಅರುಂಡಿನೇಸಿಯ ಎಂಬುದು ಇದರ ವೈಜ್ಞಾನಿಕ ಹೆಸರು. ಯೂರೋಪ್ ಖಂಡದ ಸಮಶೀತೋಷ್ಣವಲಯ. ಏಷ್ಯ ಮತ್ತು ಉತ್ತರ ಅಮೆರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಒಳ್ಳೆಯ ಮೇವು ಎಂದು ಕಂಡುಕೊಂಡ ಮೇಲೆ ಮೊಟ್ಟಮೊದಲ ಬಾರಿಗೆ ಇದನ್ನು ಸ್ವೀಡನ್ನಿನಲ್ಲಿ ಬೆಳೆಸಲಾಯಿತು. ಇತ್ತೀಚೆಗೆ ಬೇರೆ ದೇಶಗಳಲ್ಲಿಯೂ ಇದನ್ನು ಹುಲ್ಲುಗಾವಲುಗಳಲ್ಲಿ ಬೆಳೆಸಲಾಗುತ್ತಿದೆ.

ಕ್ಯಾನರಿ ಹುಲ್ಲು ಸುಮಾರು 4'-8' ಎತ್ತರಕ್ಕೆ ಬೆಳೆಯುವ ಸದೃಢವಾದ ಬಹುವಾರ್ಷಿಕ ಸಸ್ಯ. ದನಕರುಗಳ ತುಳಿತಕ್ಕೆ ಸಿಕ್ಕಿದರೂ ಇದರ ಪ್ರಕಂದಗಳು ಹಾಳಾಗುವುದಿಲ್ಲ. ಗಿಡದಿಂದ ನೇರವಾಗಿ ಮೇಲಕ್ಕೆ ಬೆಳೆಯುವ ಹಲವಾರು ಗೆಣ್ಣು ಕಾಂಡಗಳು ಹೊರಡುತ್ತವೆ. ಒಂದೊಂದರಲ್ಲೂ 5-8 ಅಗಲವಾದ ಎಲೆಗಳಿವೆ. ಹೂಗಳು ಉರುಳೆಯಾಕಾರದ ಸಂಕೀರ್ಣ ಬಗೆಯ ಹೂಗೊಂಚಲಿನಲ್ಲಿ ಸಮಾವೇಶಗೊಂಡಿವೆ.

ಫಲವತ್ತಾದ ಮತ್ತು ಬಹಳ ತೇವಪೂರಿತವಾದ ಮಣ್ಣಿನಲ್ಲಿ ಈ ಹುಲ್ಲು ಚೆನ್ನಾಗಿ ಬೆಳೆಯುತ್ತದೆ. ಚೌಳು ಭೂಮಿಯಲ್ಲಿ ಬೆಳೆಯಲಾರದು. ಚೆನ್ನಾಗಿ ಹದಮಾಡಿದ ಭೂಮಿಯಲ್ಲಿ ಎಕರೆಗೆ 4-8 ಪೌ.ಬೀಜದಂತೆ ಬಿತ್ತಿ ಬೆಳೆಸಬಹುದು. ಕ್ಯಾನರಿ ಹುಲ್ಲು ಒಂದು ಉತ್ತಮ ದರ್ಜೆಯ ಮೇವು. ಇದರ ದಂಟು ರಸಭರಿತವಾಗೂ ರುಚಿಯಾಗೂ ಇರುವುದರಿಂದ ದನಗಳಿಗೆ ಅಚ್ಚುಮೆಚ್ಚು.  ತೆನೆಗಳು ಅದೇ ತಾನೇ ಹೊರಡುತ್ತಿರುವ ಹಂತದಲ್ಲಿ ಇದನ್ನು ಕಟಾಯಿಸಬೇಕು. ಇಳುವರಿ ಎಕರೆಗೆ 2-3ಳಿ ಟನ್‍ವರೆಗೆ ಇದೆ. ಬರಿ ಮೇವಾಗಿ ಮಾತ್ರವಲ್ಲದೆ ಕಾಲುವೆ, ಹಳ್ಳದ ದಂಡೆಗಳಲ್ಲಿ ಉಂಟಾಗುವ ಭೂಸವೆತವನ್ನು ನಿಲ್ಲಿಸುವುದಕ್ಕೂ ಕ್ಯಾನರಿಹುಲ್ಲನ್ನು ಬೆಳೆಯಬಹುದು. 			   										(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ